ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಯಕ್ಷಗಾನದ ಮಹಾನ್‌ ಸಾಧಕ, ಯಕ್ಷಗಾನ ಮುಖವರ್ಣಿಕೆಯ ಶಿಲ್ಪಿ ಅಡೂರು ಶ್ರೀಧರ್‌ ರಾವ್‌

ಲೇಖಕರು : ಗಂಗಾಧರ ಮಟ್ಟಿ
ಮ೦ಗಳವಾರ, ಜುಲೈ 14 , 2015

ಯಕ್ಷಗಾನದ ಬಗ್ಗೆ ಅನುದಿನವೂ ಚಿಂತಿಸುವ ಹಾಗೂ ಈ ಬಗ್ಗೆ ಕಾರ್ಯಪ್ರವೃತ್ತರಾಗಿರುವ ಅಡೂರು ಶ್ರೀಧರ ರಾವ್‌ ಅವರೊಬ್ಬ ಮಹಾನ್‌ ಸಾಧಕ. ಕಲಾ ಪೋಷಕ, ಕಲಾರಾಧಕ, ಯಕ್ಷಗಾನ ಮುಖವರ್ಣಿಕೆ ಶಿಲ್ಪಿ ನಮ್ಮನ್ನಗಲಿದ್ದಾರೆ.

ಕುಗ್ರಾಮ ಅಡೂರಿಗೂ, ಹೈಟೆಕ್‌ ಅಮೇರಿಕಾಕ್ಕೂ ನಡುವೆ ಸೇತುವೆ ಕಲ್ಪಿಸಿದವರು ಶ್ರೀಧರ್‌ ರಾವ್‌. ಎಲ್ಲಿಯ ಅಡೂರು ಎಲ್ಲಿಯ ಅಮೆರಿಕಾ ಎನ್ನಬೇಡಿ. ಇವೆರಡಕ್ಕೂ ಸಂಬಂಧ ಕಲ್ಪಿಸಿದವರು ಅಡೂರು. ಅವರು ರಚಿಸಿದ ಯಕ್ಷಗಾನ ಮುಖವರ್ಣಿಕೆಗಳು, ಆಕರ್ಷಕ ಯಕ್ಷಗಾನ ಕಲಾಕೃತಿಗಳು ಅಮೆರಿಕ, ಯುರೋಪಿಯನ್ನರ ಮನೆಗಳಲ್ಲಿ ರಾರಾಜಿಸುತ್ತಿವೆ. ಅವರ ಯಕ್ಷಗಾನದ ಪ್ರತಿಕೃತಿಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದ್ದು ಸರಕಾರದಿಂದಲೂ ಅಂಗೀಕರಿಸಲ್ಪಟ್ಟಿದೆ. ಈ ವರೆಗೆ ಸುಮಾರು 8 ಸಾವಿರಕ್ಕೂ ಮಿಕ್ಕಿ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಮಾರಾಟವಾಗಿದೆ.

ಯಕ್ಷಗಾನದ ಪರಂಪರಾಗತ ಕ್ರಮದ ಬಗ್ಗೆ ಕೃತಿ ರಚನೆ, ಸ್ವಂತ ಖರ್ಚಿನಿಂದ ಯಕ್ಷಗಾನವನ್ನು ಶ್ರಾವ್ಯ ಹಾಗೂ ದೃಶ್ಯ ಮಾಧ್ಯಮಗಳಿಗೂ ಪರಿಚಯಿಸಿದ ಖ್ಯಾತಿ ಇವರದ್ದು. ಅದ್ಭುತ ವೇಷ ಹಾಗೂ ನಟನಾ ಸಾಮರ್ಥ್ಯ , ಅರ್ಥಗಾರಿಕೆ ಹಾಗೂ ಮುಖವರ್ಣಿಕೆಗಳ ಸೃಷ್ಟಿಶೀಲತೆಯಿಂದ ಯಕ್ಷಲೋಕದ ಪ್ರತಿಭಾ ಸಂಪನ್ನರಾಗಿ ಶ್ರೀಧರ ರಾವ್‌ ಮೆರೆ‌ದಿದ್ದಾರೆ. ಯಕ್ಷಗಾನದ ಒಟ್ಟು 80 ವಿವಿಧ ಮುಖವರ್ಣಿಕೆಗಳನ್ನು ಅವರು ರಚಿಸಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅವರಿಗೆ ಜಾನಪದ ಜ್ಞಾನ ವಿಜ್ಞಾನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಕಲಾವಿದರಾದ ರಾಮಚಂದ್ರಯ್ಯ ಹಾಗೂ ಕಾವೇರಮ್ಮ ಅವರ ಸುಪುತ್ರರಾದ ಶ್ರೀಧರ ರಾವ್‌ ಅವರು ಮನೆಯೇ ಪಾಠಶಾಲೆಯಾಗಿ ತಂದೆಯ ಶಿಷ್ಯವೃತ್ತಿಯಲ್ಲಿ ಬೆಳೆದವರು. ಮನೆಯೇ ರಂಗಸ್ಥಳವಾಗಿ ತಾಳಮದ್ದಲೆಯಲ್ಲಿ ಭಾಗವಹಿಸುತ್ತಾ ಬಹುಬೇಗ ಎತ್ತರಕ್ಕೇರಿದರು. ಅವರೇ ಸಂಘಟಿಸಿದ ಯಕ್ಷಗಾನ ತಂಡದ ಮೂಲಕ ಯಕ್ಷಗಾನವನ್ನು ನಾಡಿನ ಉದ್ದಗಲಕ್ಕೂ ಕೊಂಡೊಯ್ದರು. ತಾವೇ ಕಟ್ಟಿ ಬೆಳೆಸಿದ ಯಕ್ಷಗಾನ ಕಲಾ ಕೇಂದ್ರದ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಉದ್ಯೋಗಕ್ಕೆ ರಾಜೀನಾಮೆ

ಎಂಜಿನಿಯರಿಂಗ್‌ ಪದವೀಧರರಾದ ಅವರು ಮುಂಬೈ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ದುಡಿದು ಅಪಾರ ಅನುಭವ ಪಡೆದರು. ಯಕ್ಷಗಾನದ ಪರಂಪರಾಗತ ವೇಷ, ಬಣ್ಣಗಾರಿಕೆ, ಮುಖವಾಡದ ತಯಾರಿಕೆಯಲ್ಲಿ ಆಸಕ್ತರಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಹಿಂತಿರುಗಿದರು. ಆನಂತರದ ವರ್ಷಗಳಲ್ಲಿ ಈ ಕುರಿತು ವಿಪುಲ ಅಧ್ಯಯನ ನಡೆಸಿದ ಅವರು ಹಳೆ ತಲೆಮಾರಿನ ವೇಷಧಾರಿಗಳು, ಭಾಗವತರು, ಮೇಳದ ಸಂಚಾಲಕರು ಹಾಗೂ ವೇಷ ಭೂಷಣ ತಯಾರಕರನ್ನು ಭೇಟಿಯಾಗಿ ತಮ್ಮ ಅನುಭವವನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

ಅವರ ಹಿರಿಯರು ಅಡೂರು ಮಹಾಲಿಂಗೇಶ್ವರ ಮೇಳ ನಡೆಸುತ್ತಿದ್ದರು. ಮೇಳ ನಿಂತು ಹೋದ ಮೇಲೆ ಯಕ್ಷಗಾನದ ವೇಷ ಭೂಷಣಗಳು ಅಟ್ಟ ಸೇರಿದ್ದವು. ಇದಕ್ಕೆ ಹೊಸ ರೂಪ ಕೊಡಬೇಕೆಂಬ ದೃಷ್ಟಿಯಿಂದ ಯಕ್ಷಗಾನ ಮುಖವರ್ಣಿಕೆಗಳ ನಿರ್ಮಾಣಕ್ಕೆ ಇಳಿದರು. ಈ ಕಾಯಕದಲ್ಲಿ ಅವರಿಗೆ ಎಲ್ಲ ಬಗೆಯ ಸಮ್ಮಾನ ಗೌರವ ಪ್ರಶಸ್ತಿಗಳು ದೊರೆತವು. ಹೇಳಿಕೊಳ್ಳುವ ಆರ್ಥಿಕ ಲಾಭವಿಲ್ಲದಿದ್ದರೂ ಕೂಡಾ ಇದರಲ್ಲಿ ಆತ್ಮ ತೃಪ್ತಿ ಇದೆ ಎನ್ನುತ್ತಿದ್ದರು.

ಅಡೂರು ಶ್ರೀಧರ ರಾವ್‌
ಜನನ : 1937
ಜನನ ಸ್ಥಳ : ಅಡೂರು, ಕಾಸರಗೋಡು ಜಿಲ್ಲೆ
ಕೇರಳ ರಾಜ್ಯ
ಕಲಾಸೇವೆ:
ಕಲಾ ಪೋಷಕ, ಕಲಾರಾಧಕ, ಯಕ್ಷಗಾನ ಮುಖವರ್ಣಿಕೆ ಶಿಲ್ಪಿ ಯಕ್ಷಗಾನದ ಒಟ್ಟು 80 ವಿವಿಧ ಮುಖವರ್ಣಿಕೆಗಳನ್ನು ರಚಿಸಿದ್ದಾರೆ. ದೇಶ ವಿದೇಶಗಳಲ್ಲಿ ಅವರು ರಚಿಸಿದ ಯಕ್ಷಗಾನ ಮುಖವರ್ಣಿಕೆಗಳು ರಾರಾಜಿಸುತ್ತಿವೆ. 8 ಸಾವಿರಕ್ಕೂ ಮಿಕ್ಕಿ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಮಾರಾಟವಾಗಿದೆ.
ಪ್ರಶಸ್ತಿಗಳು:
  • ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿ೦ದ ಜಾನಪದ ಜ್ಞಾನ ವಿಜ್ಞಾನ ರಾಜ್ಯ ಪ್ರಶಸ್ತಿ
  • ಜಾನಪದ ಮತ್ತು ಯಕ್ಷಗಾನ ಬಲಿಪ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ 200ಕ್ಕೂ ಮಿಕ್ಕಿ ಸನ್ಮಾನ ಹಾಗೂ ಪ್ರಶಸ್ತಿಗಳು

ಮರಣ ದಿನಾ೦ಕ : ಜೂನ್ 22, 2015

ವರ್ಣ ವೈಭವ ಗ್ರಂಥ ರಚನೆ

ಅಡೂರು ಮೇಳದ ಯಕ್ಷಗಾನ ಸಾಮಾಗ್ರಿಗಳನ್ನು ನಿಧಿಯಂತೆ ಕಾಪಾಡಿಕೊಂಡು ಬರುತ್ತಿದ್ದರು. ತೆಂಕುತಿಟ್ಟು ಇತಿಹಾಸದ ಸ್ತ್ರೀವೇಷ, ಪಗಡಿ ಹಾಗೂ ರಾಜ ವೇಷಗಳ ಪರಂಪರಾಗತ ಮುಖವರ್ಣಿಕೆಗಳ ವರ್ಣ ವೈಭವ ಅವರು ರಚಿಸಿದ ಕಲಾಕೃತಿಗಳಲ್ಲಿ ಗಮನ ಸೆಳೆಯುತ್ತವೆ. ಶೂರ್ಪನಖೀ, ರಾವಣ, ಕುಂಭಕರ್ಣ, ಶಿಶುಪಾಲ, ಅತಿಕಾಯ, ಕೃಷ್ಣ, ಇಂದ್ರಜಿತು, ಮಹಿಷಾಸುವ, ಹನುಮಂತ ಮೊದಲಾದ ಮುಖವಾಡಗಳಲ್ಲಿ ಜೀವಂತಿಕೆಯ ಕಳೆಗಳಿವೆ. ಮಹಿಷಾಸುರನ ವೇಷಕ್ಕೆ ತಕ್ಕಂತೆ ಹೊಸ ಕ್ರಮದ ಮುಖವರ್ಣಕ್ಕೆ ಕೊಂಬುಗಳನ್ನು ತಯಾರಿಸಿ ತಮ್ಮ ಉತ್ತಮ ಅಭಿವ್ಯಕ್ತಿಯನ್ನು ಪ್ರದರ್ಶಿಸಿದ್ದಾರೆ.

ಚಿತ್ರ ಕೃಪೆ : ಗೋವಿ೦ದ ಬಳ್ಳಮೂಲೆ
ಹಿಮ್ಮೇಳ, ಪರಿಕರಗಳನ್ನು ಅವರೇ ತಯಾರಿಸುತ್ತಿದ್ದರು. ಕಥಕ್ಕಳಿ, ಭೂತಾರಾಧನೆಗೆ ಬೇಕಾದ ಅಗತ್ಯ ಪರಿಕರಗಳು ಅವರಲ್ಲಿ ಲಭ್ಯವಿರುತ್ತಿತ್ತು. ಅಲ್ಲದೆ ಎಳೆಯ ಕಲಾವಿದರಿಗೂ ತರಬೇತಿ ನೀಡುತ್ತಿದ್ದರು. ಯಕ್ಷಗಾನ ಪ್ರಸಂಗ ಪುಸ್ತಕಗಳು, ಅರ್ಥಗಾರಿಕೆಯ ವಿವರಗಳು, ಯಕ್ಷಗಾನಕ್ಕೆ ಅಗತ್ಯವಿರುವ ಪುರಾಣ ಪುಸ್ತಕಗಳು, ವಿಮರ್ಶೆಗಳು, ವೀಡಿಯೋ, ಆಡಿಯೋ ಕ್ಯಾಸೆಟ್‌ಗಳು ಅವರಲ್ಲಿದ್ದವು. ಹಲವಾರು ಕಡೆ ಇವರ ಎಲ್ಲ ಮುಖವಾಡದ ಪ್ರದರ್ಶನಗಳು ನಡೆದಿವೆ. 2004ರಲ್ಲಿ ಮೂರು ದಿನಗಳ ಯಕ್ಷಗಾನ ಸಮ್ಮೇಳನವನ್ನು ಅಡೂರಿನಲ್ಲಿ ನಡೆಸಿ ತೆಂಕುತಿಟ್ಟು ಯಕ್ಷಗಾನ ಅಧ್ಯಯನ ಶಿಬಿರ ,ಪರಂಪರೆಯಿಂದ ಮರೆಯಾಗುತ್ತಿರುವ ವೇಷಗಳ ಬಗ್ಗೆ ಚಿಂತನೆ, ಪ್ರಾತ್ಯಕ್ಷಿಕೆ, ರಂಗಪ್ರಯೋಗ, ದಾಖಲಾತಿ, ಯಕ್ಷಗಾನ ಬಯಲಾಟಗಳನ್ನು ನಡೆಸಿ ಯಕ್ಷಗಾನಕ್ಕೊಂದು ಸುವರ್ಣಯುಗ ಮರುಕಳಿಸಲು ಸಾಧ್ಯವೆಂಬುದನ್ನು ತೋರಿಸಿಕೊಟ್ಟಿದ್ದರು.

ಯಕ್ಷಗಾನ ಮೇಳಗಳಿಗೂ ಕಿರೀಟ, ವೇಷ ಭೂಷಣಗಳನ್ನು ತಯಾರಿಸಿಕೊಟ್ಟಿದ್ದರು. ಸುಳ್ಯ ರೋಟರಿ ಕ್ಲಬ್‌ ಇವರ ಅತಿಕಾಯ ವೇಷದ ಮುಖವರ್ಣಿಕೆಯನ್ನು ವರ್ಲ್ಡ್ ಎಕ್ಸ್‌ಚೇಂಜ್‌ ಪ್ರಂಡ್‌ಶಿಫ್‌ ಪ್ರೋಗ್ರಾಮ್‌ ಮೂಲಕ ವಿದೇಶಿ ಸಂಸ್ಥೆಗಳಿಗೆ ವಿತರಿಸಿದೆ. ಯಕ್ಷಗಾನದ ಉತ್ತಮ ಸಂಘಟಕರಾದ ಅವರು ತಾಳಮದ್ದಳೆ ಕಲಾವಿದರಾಗಿದ್ದರು. ಅಡೂರಿನಲ್ಲಿ ರೆಂಜಾಳ ರಾಮಕೃಷ್ಣ ರಾವ್‌ ಹಾಗೂ ದಾಸರಬೈಲು ಚನಿಯ ನಾಯ್ಕರೊಂದಿಗೆ ಸೇರಿ ಮಕ್ಕಳ ಮೇಳವನ್ನು ಕಟ್ಟಿ ಬೆಳೆಸಿ ನಾಡಿನಾದ್ಯಂತ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದರು.

ನರಕಾಸುರ, ಮಾಗಧ, ಹರಿಶ್ಚಂದ್ರ, ಬಲಿ, ಶ್ರೀರಾಮ, ವಾಲಿ ಮುಂತಾದ ವಿಭಿನ್ನ ಪಾತ್ರಗಳಿಗೆ ನ್ಯಾಯವೊದಗಿಸಿದ್ದರು. ಪಂಚವರ್ಣಗಳಾದ ಅರಸಿನ, ಕೆಂಪು, ಕಪ್ಪು, ಬಿಳಿ, ಹಸಿರು ಬಣ್ಣಗಳಿಗೆ ಅದರದ್ದೇ ಆದ ಮಹತ್ವವಿದ್ದು ಮುಖವರ್ಣಿಕೆಯಲ್ಲಿ ಯಾವ ಯಾವ ಪಾತ್ರಗಳಲ್ಲಿ ಅದನ್ನು ಹೇಗೆ ಬಳಸಬೇಕೆನ್ನುವ ಬಗ್ಗೆ ವಿವರಣೆ ನೀಡಿ ಹಲವಾರು ಕಡೆ ಉಪನ್ಯಾಸ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದರು.

ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಕರ್ನಾಟಕ ಜಾನಪದ ಟ್ರಸ್ಟ್‌ನಿಂದ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಬಲಿಪ ಪ್ರಶಸ್ತಿ, ಮರಾಟಿ ಸಮಾಜ ಅಡೂರು , ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ , ಮಧೂರು ಸಿದ್ಧಿವಿನಾಯಕ ದೇವಸ್ಥಾನದಲ್ಲಿ, ಮಲ್ಲ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ರಜತ ಮಹೋತ್ಸವ, ಕರ್ನಾಟಕ ಕರಾವಳಿ ಯಕ್ಷಗಾನ ಸಮ್ಮೇಳನ, ಕರ್ನೂರು ವಿಷ್ಣುಮೂರ್ತಿ ಯಕ್ಷಗಾನ ಸಂಘ, ಮುಂಡೋಡಿನ ಮೂಕಾಂಬಿಕ ಯಕ್ಷಗಾನ ಸಂಘ, ಕವಿ ಮುದ್ದಣ ಮಿತ್ರ ಮಂಡಳಿ ನಂದಳಿಕೆ, ಅಮೇರಿಕಾ ಪೆನ್ಸಿಲ್ವೇನಿಯಾ ವಿ.ವಿ., ಮರ್ಕಂಜ ಶ್ರೀಕೃಷ್ಣ ಕಲಾ ಸಂಘ, ಸುಳ್ಯ ರೋಟರಿ ಕ್ಲಬ್‌ , ಚೇತನಾ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್‌ ಕುಂಟಾರು ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ 200ಕ್ಕೂ ಮಿಕ್ಕಿ ಸಮ್ಮಾನಗಳು ದೊರೆತಿದ್ದವು.

****************




ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ